ಹೋ, ಚೀಮಿನ್
	1890-1969. ಸ್ವತಂತ್ರ ವಿಯಟ್ನಾಮ್‍ನ ಸ್ಥಾಪಕ, ಉತ್ತರ ವಿಯಟ್ನಾಮ್‍ನ ಮೊದಲ ಅಧ್ಯಕ್ಷ. ಇವನ ನಿಜವಾದ ಹೆಸರು ಗುಯೆನ್ ಢಬ್ ಥಾ. ಹ್ವಾಂಗ್ ಟು ಎಂಬಲ್ಲಿ 1890 ಮೇ 19ರಂದು ಜನಿಸಿದ. ಬಡತನದಲ್ಲೇ ಬೆಳೆದ ಈತ ಫ್ರಾನ್ಸಿನಲ್ಲಿ ಉಪಾಧ್ಯಾಯನಾಗಿ, ನಾವಿಕನಾಗಿ, ಕಾರ್ಮಿಕನಾಗಿ ಕೆಲಸಮಾಡಿದ. ಫ್ರಾನ್ಸಿನಲ್ಲಿರುವಾಗಲೇ (1917-23) ಕಮ್ಯೂನಿಸಮ್ ಸಿದ್ಧಾಂತದ ಪ್ರಭಾವಕ್ಕೊಳಗಾದ. ಪ್ಯಾರಿಸ್ಸಿನಲ್ಲಿ ವಿಯಟ್ನಾಮಿನ ಮಾಕ್ರ್ಸಿಸ್ಟ್ ಗುಂಪೊಂದನ್ನು 1917ರಲ್ಲೆ ಒಟ್ಟುಗೂಡಿಸಿದ. 1920ರ ಹೊತ್ತಿಗೆ ಸೋವಿಯತ್ ರಷ್ಯಕ್ಕೆ ಹೋಗಿ ಕಮ್ಯೂನಿಸ್ಟ್ ಸಿದ್ಧಾಂತದ ವಿಧಾನಗಳನ್ನು ಪರಿಚಯಿಸಿಕೊಂಡ. ಅಲ್ಲಿಂದ ಚೀನಕ್ಕೆ ಬಂದು ಕ್ಯಾಂಟನ್ ನಗರದಲ್ಲಿ ಚೀನದ ಕಮ್ಯೂನಿಸ್ಟರು ಹಾಗೂ ರಷ್ಯದ ಸಲಹೆಗಾರರ ನೆರವಿನಿಂದ ವಿಯಟ್ನಾಮ್ ಯುವ ಕ್ರಾಂತಿ ಪಕ್ಷವನ್ನು ಸ್ಥಾಪಿಸಿದ. ಇದೇ ಮುಂದಿನ ವಿಯಟ್ನಾಮ್ ಕಮ್ಯೂನಿಸ್ಟ್ ಪಕ್ಷದ ಉದಯಕ್ಕೆ ನಾಂದಿಯಾಯಿತು. ರಷ್ಯದ ಬೋರೋಡಿನ್‍ನ ಸಹಾಯಕನಾಗಿ ಕೆಲಸಮಾಡಿದ ಈತ ವಿಯಟ್ನಾಮ್‍ನಲ್ಲಿ ಕಮ್ಯೂನಿಸ್ಟ್ ಸಿದ್ಧಾಂತದ ಪ್ರವರ್ತಕನಾದ. ಕಮ್ಯೂನಿಸ್ಟ್ ಸಿದ್ಧಾಂತದಿಂದ ಪ್ರಭಾವಿತನಾಗಿ ವಿಯಟ್ನಾಮ್‍ನ ಸ್ವಾತಂತ್ರ್ಯ ಸಮರದಲ್ಲಿ ಕಮ್ಯೂನಿಸ್ಟ್ ಧೋರಣೆಯಿಂದ ಹೋರಾಡಿ ಕೊನೆಗೆ ಉತ್ತರ ವಿಯಟ್ನಾಮಿನಲ್ಲಿ ಕಮ್ಯೂನಿಸ್ಟ್ ರಾಜ್ಯವನ್ನು ಸ್ಥಾಪಿಸಿ ಅದರ ಮೊದಲ ಅಧ್ಯಕ್ಷನಾದ. ಎರಡನೆಯ ಮಹಾಯುದ್ಧದ ಸಮಯದಲ್ಲಿ ತನ್ನ ವಿವೇಕಶಾಲಿ ನಾಯಕತ್ವ ತೋರಿ ಜಪಾನೀಯರನ್ನು, ಫ್ರೆಂಚರನ್ನು ಉತ್ತರ ವಿಯಟ್ನಾಮಿನಿಂದ ಓಡಿಸಿ ಅತ್ಯಂತ ಮಹತ್ತ್ವಪೂರ್ಣ ವ್ಯಕ್ತಿ ಎನಿಸಿಕೊಂಡ. 20ನೆಯ ಶತಮಾನದ ಗಣನೀಯ ಕಮ್ಯೂನಿಸ್ಟ್ ನಾಯಕರಲ್ಲಿ ಹೋ ಚೀಮಿನ್‍ನ ಹೆಸರು ಮುಖ್ಯವಾದದ್ದು.

	1930ರಲ್ಲಿ ಹಾಂಗ್‍ಕಾಂಗಿನಲ್ಲಿ ನಡೆದ ಮಹಾಸಭೆಯಲ್ಲಿ ಈತ ವಿಯಟ್ನಾಮ್ ಕಮ್ಯೂನಿಸ್ಟ್ ಪಕ್ಷವನ್ನು ಸ್ಥಾಪಿಸಿದ. ಅಲ್ಲಲ್ಲಿ ಚೆದರಿ ಹೋಗಿದ್ದ ಕ್ರಾಂತಿಕಾರಿ ಪಕ್ಷಗಳೆಲ್ಲವೂ ಈ ಪಕ್ಷದಲ್ಲಿ ವಿಲೀನವಾದವು. ರೈತರ ಹಿತರಕ್ಷಣೆಗಾಗಿ ಚಳವಳಿಗಳು ಮೆರವಣಿಗೆಗಳು ನಡೆದವು. ಅಲ್ಲಲ್ಲಿ ಸಣ್ಣಪುಟ್ಟ ದಂಗೆಗಳಾದವು. ಫ್ರೆಂಚ್ ಸರ್ಕಾರ ಈ ಚಳವಳಿಗಳನ್ನು ನೆಲಸಮ ಮಾಡಿತು. 1931ರಲ್ಲಿ ಬ್ರಿಟಿಷರು ಹಾಂಗ್‍ಕಾಂಗಿನಲ್ಲಿ ಈತನನ್ನು ಭೂಗತ ಕಾರ್ಯ ಚಟುವಟಿಕೆಗಳಿಗಾಗಿ ಬಂಧಿಸಿ ಎರಡು ವರ್ಷಗಳ ಕಾಲ ಸೆರೆಯಲ್ಲಿಟ್ಟರು.

	ವಿಯಟ್ನಾಮ್ ವಿಮೋಚನಾ ಚಳವಳಿಯ ನಾಯಕತ್ವವನ್ನು ಕಮ್ಯೂನಿಸ್ಟ್ ಪಕ್ಷ ವಹಿಸಿಕೊಂಡಿತು. ಉತ್ತರ ವಿಯಟ್ನಾಮಿನಲ್ಲಿ ಜನಾಡಳಿತ ಸ್ಥಾಪನೆಯ ಪ್ರಯತ್ನ ವಿಫಲಗೊಂಡಾಗ ಕಮ್ಯೂನಿಸ್ಟರು  ಚೀನದ ಕ್ವಾಂಗ್ಸಿ ಪ್ರಾಂತ್ಯದ ಲ್ಯೂಜೊನಲ್ಲಿ ಸಭೆ ಸೇರಿದರು. ಹೋ ಚೀಮಿನ್‍ನ ನಾಯಕತ್ವದಲ್ಲಿ `ವಿಯಟ್ನಾಮ್ ಸ್ವತಂತ್ರ ಪಕ್ಷ ಅಥವಾ ವಿಯಟ್ನಾಮಿನ್ ಸ್ಥಾಪಿತವಾಯಿತು. ವಿಯಟ್ನಾಮಿನ ಇತರ ದೇಶಪ್ರೇಮಿ ಗುಂಪುಗಳು ಇದರೊಂದಿಗೆ ಸೇರಿ ವಿಯಟ್ನಾಮ್ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಿದ್ಧವಾದವು. 1941ರ ಮೇ ತಿಂಗಳಲ್ಲಿ ರೂಪುಗೊಂಡ ಈ ಪಕ್ಷದ ರೂಪುರೇಷೆಗಳು ಅಕ್ಟೋಬರ್ ಹೊತ್ತಿಗೆ ತೀವ್ರ ಪ್ರಸಾರ ಹೊಂದಿದವು. ಮಾವೋ ಹೇಳಿದ ಹೊಸ ಪ್ರಜಾತಂತ್ರದ ಮಾದರಿಯಲ್ಲೇ ವಿಸಂಯುಕ್ತ ಬೂಜ್ರ್ವಾ-ಕಮ್ಯೂನಿಸ್ಟ್ ಕ್ರಾಂತಿಗಾಗಿ ಯೋಜನೆಯನ್ನು ರೂಪಿಸಿದರು. ವಿಯಟ್ನಾಮಿನ್ ಪಕ್ಷದ ಗುರಿ ಜಪಾನೀಯರನ್ನೂ ಫ್ರೆಂಚರನ್ನೂ ವಿಯಟ್ನಾಮಿನಿಂದ ಓಡಿಸುವುದು; ಎಲ್ಲ ವರ್ಗಗಳ ಶೋಷಿತರನ್ನೂ ಕ್ರಾಂತಿಕಾರರನ್ನೂ ಒಟ್ಟುಗೂಡಿಸಿ ವಸಾಹತುಶಾಹಿಯ ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನು ಸ್ಥಾಪಿಸಿಸುವುದು; ಸ್ವತಂತ್ರ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆ, ಪ್ರಜಾತಂತ್ರ ಸ್ವಾತಂತ್ರ್ಯವನ್ನು ನೀಡಿ ಉಳುವವನಿಗೇ ಭೂಮಿ ಹಾಗೂ ಖಾಸಗೀ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು. ಇಂಥ ಘೋಷಣೆಗಳಿಂದಾಗಿ ರಾಷ್ಟ್ರೀಯ ಭಾವನೆ ಜಾಗೃತ ಗೊಂಡಿತು. ಎಲ್ಲ ವರ್ಗಗಳಿಗೂ ಚೇತನ ದೊರಕಿ ಒಂದುಗೂಡಿದವು. ವಿಯಟ್ನಾಮ್ ಗೆರಿಲ್ಲಾ ಹೋರಾಟ ಆರಂಭಿಸಿ ಅನೇಕ ಪ್ರದೇಶಗಳನ್ನು ಆಕ್ರಮಿಸತೊಡಗಿತು.

	1945ರ ವೇಳೆಗೆ ಜಪಾನಿನ ಪರಿಸ್ಥಿತಿ ಹದಗೆಟ್ಟಾಗ ಅದು ಇಂಡೋ ಚೀನದ ನೇರ ನಿಯಂತ್ರಣಕ್ಕೆ ತೊಡಗಿತು. ವಿಯಟ್ನಾಮಿನ ವಸಾಹತು ಸ್ಥಿತಿ ಕೊನೆಗೊಂಡಿತೆಂದು ಘೋಷಿಸಿ, ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸಿತು. ಅನ್ನಾಮಿನ ಹಿಂದಿನ ದೊರೆ ಬೋಡೆಯನ್ನು ಪುನಃ ಸ್ಥಾಪಿಸಿತು.

	1946ರ ಆಗಸ್ಟ್‍ನಲ್ಲಿ ವಿಯಟ್ನಾಮ್ ಸ್ವತಂತ್ರ ರಾಷ್ಟ್ರವಾಯಿತು. ಹೋ ಚೀಮಿನ್ ಅದರ ಪ್ರಥಮಾಧ್ಯಕ್ಷನಾದ. ಫ್ರೆಂಚರು ಈ ಸ್ವಾತಂತ್ರ್ಯವನ್ನು ಅಂಗೀಕರಿಸಲಿಲ್ಲ. 1946ರ ಸೆಪ್ಟೆಂಬರ್‍ನಲ್ಲಿ ಫೌಂಟನ್ ಬ್ಲೂ ಒಪ್ಪಂದ ನಡೆಯಿತು. ಹೋ ಚೀಮಿನ್ ಹೊಂದಾಣಿಕೆಗೆ ಸಿದ್ಧವಿದ್ದರೂ ಫ್ರೆಂಚರ ಬಿಗಿ ವರ್ತನೆಯಿಂದಾಗಿ ಒಪ್ಪಂದ ಮುರಿಯಿತು. 1946ರ ಕೊನೆಗೆ ಯುದ್ಧ ಪ್ರಾರಂಭವಾಯಿತು. ಸು. 8 ವರ್ಷಗಳ ಕಾಲ (1954) ನಡೆದ ಗೆರಿಲ್ಲ ಯುದ್ಧ ಎರಡೂ ಕಡೆಯಲ್ಲೂ ಅಪಾರ ಹಾನಿಯನ್ನುಂಟುಮಾಡಿತು. ಯುದ್ಧಕಾಲದಲ್ಲಿ ವಿಯಟ್ನಾಮ್ ಪೂರ್ಣ ಕಮ್ಯೂನಿಸ್ಟ್‍ಧೋರಣೆ ಹೊಂದಿತು. 1954ರ ಜಿನೀವ ಒಪ್ಪಂದ ಯುದ್ಧವನ್ನು ಕೊನೆಗೊಳಿಸಿತು. ಆದರೆ ವಿಯಟ್ನಾಮ್ ಎರಡು ಭಾಗವಾಗಿ ಒಡೆಯಿತು. ಉತ್ತರ ವಿಯಟ್ನಾಮ್ ಹೋ ಚೀಮಿನ್ನನ ನೇತೃತ್ವದಲ್ಲಿ ಕಮ್ಯೂನಿಸ್ಟ್ ರಾಷ್ಟ್ರವಾಗಿ ಬೆಳೆಯಿತು.

	1960ರ ಹೊತ್ತಿಗೆ ಉತ್ತರ ಹಾಗೂ ದಕ್ಷಿಣ ವಿಯಟ್ನಾಮ್ ನಡುವೆ ಪುನಃ ಯುದ್ಧ ಆರಂಭವಾಯಿತು. ಹೋ ಚೀಮಿನ್ ಪರೋಕ್ಷವಾಗಿ ಇದರ ಹೊಣೆ ಹೊತ್ತ. ಈ ಹೊತ್ತಿಗೆ ಆರೋಗ್ಯ ಕ್ಷೀಣಿಸಿ 1969 ಸೆಪ್ಟೆಂಬರ್ 3ರಂದು ಹೃದಯಾಘಾತದಿಂದ ನಿಧನನಾದ.

	ಹೋ ಚೀಮಿನ್ ಕಮ್ಯೂನಿಸ್ಟ್ ವಿಯಟ್ನಾಮಿನ ಪಿತಾಮಹ. ಎರಡನೆಯ ಮಹಾಯುದ್ಧ ಕಾಲದಲ್ಲಿ ತನ್ನ ರಾಜಕೀಯ ನಿಪುಣತೆ, ವಿವೇಕ ಮತ್ತು ಯುಕ್ತ ನಾಯಕತ್ವದಿಂದ ಜಪಾನೀಯರನ್ನೂ ಫ್ರೆಂಚರನ್ನೂ ಉತ್ತರ ವಿಯಟ್ನಾಮಿನಿಂದ ಓಡಿಸಿದ. ಈತನ ಸರಳತೆ, ಪ್ರಾಮಾಣಿಕತೆ, ಸ್ಥಿರತೆ ಜನರ ಮೆಚ್ಚುಗೆಗೆ ಪಾತ್ರವಾದವು. ಇವನ ನೆನಪಿನಲ್ಲಿ ಸೈಗಾನ್ ನಗರವನ್ನು ಹೋ ಚೀಮಿನ್ ನಗರವೆಂದು (1975) ಕರೆಯಲಾಯಿತು. ಈತ ಜೈಲಿನಲ್ಲಿದ್ದಾಗ ನೋಟ್ ಬುಕ್ ಫ್ರಮ್ ಪ್ರಿಸನ್ ಎಂಬ ಪುಸ್ತಕವನ್ನು ಬರೆದ. ಈತ ಒಮ್ಮೆ ಭಾರತಕ್ಕೆ ಬಂದಿದ್ದಾಗ ಪತ್ರಿಕಾ ಬಾತ್ಮಿದಾರರು `ವಿಯಟ್ನಾಮಿನಲ್ಲಿ ನಿಮ್ಮ ಪಾತ್ರವನ್ನು ಭಾರತದ ಗಾಂಧೀ ಪಾತ್ರದೊಂದಿಗೆ ಹೋಲಿಸುವಿರಾ? ಎಂದು ಪ್ರಶ್ನಿಸಿದಾಗ ಅವರು `ನಾನೂ ಮತ್ತು ಇತರರೂ ಕ್ರಾಂತಿಕಾರಿಗಳಾಗಿರಬಹುದು. ಆದರೆ ನಾವು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಮಹಾತ್ಮಾ ಗಾಂಧೀಯವರ ಶಿಷ್ಯರು, ಇದಕ್ಕಿಂತ ಹೆಚ್ಚಿಲ್ಲ ಕಡಿಮೆಯಿಲ್ಲ ಎಂದು ಉತ್ತರಿಸಿದ್ದ.  
							

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
				(ಎಸ್.ಎಮ್.ವಿ.)